ನೋಡಿದವರು ಏನಂತಾರೆ । ಸಿನಿ ವಿಮರ್ಶೆ । ಶ್ರೀನಿಧಿ ಭಟ್
ನೋಡಿದವರು ಏನಂತಾರೆ
ಸಿನಿ ವಿಮರ್ಶೆ
ಕೆಲವೊಂದು ಕ್ಷಣವನ್ನೋ ಸಂದರ್ಭವನ್ನೋ ಜೀವಿಸಿದರಷ್ಟೇ ಆ ಭಾವದ ಪೂರ್ಣಾನುಭವ ಎಂಬ ಒಪ್ಪಿಯೂ ಒಪ್ಪಲಾಗದ ಸಾಲುಗಳ ಒಳಾರ್ಥದಲ್ಲಿ ನದಿಯ ತಿಳಿನೀರಿನಂತೆ ಸಾಗುವ ಕಥನ
“ ನೋಡಿದವರು ಏನಂತಾರೆ “ .
ಕೆಲವೊಮ್ಮೆ ಯುವತಿಯೋರ್ವಳು ಧರಿಸುವ ಕುಪ್ಪಸಕ್ಕೆ ಕಸೂತಿ ಮಾಡಿಸದಿದ್ದರೆ ನೋಡಿದವರು ಅದೇನೆನ್ನುವರೋ ಎಂಬ ಕಾರಣಕ್ಕೆ ಮಾಡಿಸುವ ಕಸೂತಿಯಂತೆ ಈ ಚಿತ್ರಕಥೆಯಲ್ಲಿ ವ್ಯರ್ಥವಾಗಿ ಯಾವ ವಿಷಯವನ್ನೂ ಬಲವಂತವಾಗಿ ಪೋಣಿಸದೇ ಇದ್ದದ್ದು ಕಥೆಯ ತ್ರಾಣವನ್ನು ಹಿಡಿದಿಟ್ಟಿತ್ತು .
ಪ್ರೇಮ- ಮೋಹಕ್ಕಿಂತ ಒಡನಾಟದ ಸಿಹಿ ಸವಿದ ಮನಕ್ಕೆ ಒಡನಾಡಿಯ ಸಾಮೀಪ್ಯದ ವಿರಹದಿಂದಾದ ಸಿದ್ದಾರ್ಥನ ಚಡಪಡಿಕೆಗೆ , ಗಮನ ಕೇಂದ್ರೀಕರಿಸಲಾಗದೇ ಸಿಡುಕುವ ಮನಸ್ಥಿತಿಯ ಸಂಭಾಷಣೆಗಳು ನಿನ್ನೆ ಮೊನ್ನೆ ನಮ್ಮ ನಿಮ್ಮ ಆಫೀಸಿನದ್ದೋ ಎಂಬಂತಿದೆ. ನೋಡುಗರ ಚಿತ್ತವ ಹಿಡಿದಿಡದಲೇನೋ ಎಂಬಂತೆ ಆಗಾಗ ಬಂದು ಹೊಗುವ ನಾಯಕನ ತಾಯಿಯ ಉಲ್ಲೇಕ, ಮಡಿಕೆ ತುಂಬಲು ಒಂದು ತಂಬಿಕೆ ನೀರು ಬೇಕೆಂದಾಗ ಸಣ್ಣ ತಂಬಿಗೆ ನೀರು ಸಿಗದೇ ಕೊಡಪಾನ ಪೂರ್ತಿ ನೀರು ಸುರಿದಂತೆ ಭಾವ ಸ್ಪುರಿಸಲು ತಕ್ಕ ಮಟ್ಟಿನ ಪ್ರಯತ್ನ ನಿರ್ದೇಶಕ ಕುಲದೀಪ್ ಕಾರಿಯಪ್ಪ ಅವರದ್ದು.
ಚಡಪಡಿಕೆಯ ನಡುವೆಯೂ , ತನ್ನ ಸಹೋದ್ಯೋಗಿಯೊಂದಿಗೆ ಆಕೆಯ ಬಾಸ್ ಆಗಿದ್ದರೂ ಆಕೆಯ ಅಪೇಕ್ಷೆಯಂತೆ ಮೊದಲು ತಿರಸ್ಕರಿಸಿದ್ದರು ನಂತರ ಡ್ರಿಂಕ್ ಮತ್ತು ಮಾತುಕತೆಗೆ ಒಪ್ಪುವ ಮತ್ತು ತದನಂತರ ನೆಡೆವ ಸಂಭಾಷಣೆ ಒಡನಾಟದಷ್ಟೇ ಪ್ರಣಯವೂ ಮನುಷ್ಯ ಸಹಜ ಇಂಗಿತ ಎಂಬ ಮಾರ್ಮಿಕ ಸತ್ಯವ ಸರಳವಾಗಿ ಹೇಳಿದೆ.
ನಾಯಕನ ಪಯಣದಿ, ನಾಯಕಿಯು ಮೊದಲ ಆಗಮನದ ಸನ್ನಿವೇಶ ಬಿಕಿನಿಯಲ್ಲೇ ಇದ್ದರೂ ಕೇವಲ ತೆಳ್ಳಗೆ, ಹೀಗೆಯೇ ಇರಬೇಕೆಂಬ ಕಟ್ಟುಪಾಡುಗಳ ಬಿಟ್ಟು ನೋಡಿದವರು ಏನ್ ಅಂದ್ರೆ ನನಗೇನು ಎಂಬ ನಡಿಗೆಯಂತಿತ್ತು. ನಾಯಕ ನಾಯಕಿಯರ ಸಂಭಾಷಣೆ ಮುದವನ್ನೂ , ಅತಿಯಾದ ಆಡಂಬರವಿಲ್ಲದ ಸರಳ ಮಾತುಕಥೆಯಂತೆ ಮನಮುಟ್ಟಿಸಿದ್ದೂ ಕೂಡ ಬರವಣಿಗೆಯ ಒಂದು ಮೇಲುಗೈ. ತೋರ್ಪಡಿಸಲು ಬೀಚ್ ಮೇಲೆ ಪುಸ್ತಕವನ್ನೇ ಓದಲಿ , ಅವರ ಮನವೂ ಪ್ರಶಾಂತವೇನಲ್ಲ ಕೆಲವು ಕ್ಷಣ ಮಾತ್ರ ಇರಬಹುದು ಅದೂ ವಾಸ್ತವತೆಯ ಮರೆತಾಗ ಮಾತ್ರ ಎಂಬ ಅಂತರ್ನಿಹಿತ ಸಂದೇಶವ ಮಾತನಾಡದ ಸಂಭಾಷಣೆಯಲ್ಲಿ ಬಿಂಬಿಸಿ, ಕುರಿ ಕಾಯುವಾತನ ಕಷ್ಟ ಏನೇ ಇದ್ದರೂ ನೆಮ್ಮದಿಯಲ್ಲಿ ಆತ ಕುಬೇರ ಎಂಬ ಸಾರಾಂಶವೂ ಅರ್ಥಪೂರ್ಣವಾಗಿತ್ತು.
ಪ್ರೀತಿ ಮತ್ತು ಒಡನಾಟಕ್ಕೂ , ಮೋಹಕ್ಕೂ ಸಂಬಂಧವಿಲ್ಲ ಎಂಬ ಡೋಂಗಿ ಪ್ರೇಮ ಕಥೆಯ ಈ ಕಾಲದಲ್ಲಿ , ಒಡನಾಟದಿ ಸ್ಪುರಿವ ಪ್ರೇಮವ ಸ್ನೇಹಾಲಿಂಗನದಲ್ಲಿಯೂ , ಮತ್ತು ಪ್ರಣಯ ಸನ್ನಿವೇಶಗಳಲ್ಲಿಯೂ ತೋರಿದ್ದು ಸಮರ್ಪಕ!
ನಾಯಕ ನವೀನ ಶಂಕರ್ ಅವರ ಮನೋಜ್ಞ ನಟನೆ ಮತ್ತು ತಾನೇ ಪಾತ್ರದಂತೆ ಇದ್ದ ಅಪೂರ್ವ ಭಾರದ್ವಾಜ್ ಮನಮುಟ್ಟುವರು.
ಅಪರೂಪಕ್ಕೆ ಒಂದರಂತೆ ಇಲ್ಲಿ ಹಿನ್ನೆಲೆ ಪದ್ಯಗಳ ಸಾಹಿತ್ಯಕ್ಕೂ ಸನ್ನಿವೇಶಕ್ಕೂ ತಾಳೆಯಾದದ್ದು ಬೋನಸ್ !!
ಶ್ರೀನಿಧಿ ಭಟ್
Comments
Post a Comment