ನಿರ್ದೇಶಕ ಗುರುಪ್ರಸಾದ್ ನೆನೆಪಿನಲ್ಲಿ - ಎರಡನೇಸಲ | In memory of Director Guruprasad - EradaneSala

 



ನಿರ್ದೇಶಕ ಗುರುಪ್ರಸಾದ್ ನೆನೆಪಿನಲ್ಲಿ  - ಎರಡನೇಸಲ 


                   






ಕನ್ನಡದಲ್ಲಿ  ಕಾಣಸಿಗುವ ಚಲನಚಿತ್ರ ನಿರ್ದೇಶಕರಲ್ಲಿ ಗುರುಪ್ರಸಾದ್ ಒಬ್ಬ ಮಲೆನಾಡ ಊಟದ ಅಪ್ಪೇಮಿಡಿ ಉಪ್ಪಿನಕಾಯಿಯಂತೆ ವಿರಳ ವರ್ಗದ ತಳಿಯಂತಿದ್ದವರು . 


ಯಾರೂ ಊಹಿಸದಂತೆ ಇಳೆಯ ತೊರೆದ ಈತ ,ಅದೆಷ್ಟೋ ಕಾಂಟ್ರವರ್ಸಿಗಳಲ್ಲಿ ಮಿಂದೆದಿದ್ದರೂ , ಅವರ ಬರವಣಿಗೆ , ಕನ್ನಡ ಭಾಷಾ ಪಾಂಡಿತ್ಯ , ಚಿತ್ರಕಥೆ ಹೆಣೆವ ಪರಿ ಇವೆಲ್ಲಕ್ಕೂ ಮೀರಿ ಮನಮುಟ್ಟುವ ಅವರ ಸಂಭಾಷಣೆಗಳು ಇನ್ನು ಯಾರು ಬರೆದಾರು ?


ಹೊಡಿ ಬಡಿ ಕೊಲ್ಲು ಕೊಚ್ಚು ಎಂಬ ಇಂದಿನ ಸಂಭಾಷಣೆಗಳಲ್ಲಿ ನಾಯಕನನ್ನು ಅರ್ಧರಥಿಕನಾಗಿ ಬಿಂಬಿಸುವಷ್ಟು ಉಪ್ಪಿಲ್ಲದ ಸಾರಿನಂಥಾ ಕಥೆಗೆ ನಾಯಕನನ್ನು ಮಹಾರಥಿಕನಂತೆ ತೋರ್ವ ಅರ್ಥವಿಲ್ಲದ ಸಂಭಾಷಣೆಗೆ ಸೀಟಿ ಹೊಡೆವ ಇಂದಿನ ಪ್ರೇಕ್ಷಕರ ನಡುವೆ , ಇಂಥಾ ವೃಷ್ಟ್ಯಾನ್ನವ ಮರೆತೆವೆಂಬ ಮರೆವು ಕೂಡಾ ಅವರಲ್ಲಿ ಸುಳಿಯದು . 


ಹೀಗಿರಲು , ಗುರುಪ್ರಸಾದ್ ನೆನೆಪು ಮಾಸುವ ಮೊದಲು ಅವರ ನನ್ನಿಷ್ಟದ ಅಷ್ಟೇನು ಹಣ ಗಳಿಸದ ಒಂದು ಕ್ಲಾಸಿಕ್ ಚಿತ್ರ - “ಎರಡನೇಸಲ”  .ಇದೇ ಚಿತ್ರ ಈಗ ಇಂಗ್ಲಿಷ್ ನಲ್ಲೋ ಇಲ್ಲ ನಮ್ಮ ನೆರೆಯ ಮಲೆಯಾಳಂ ನಲ್ಲೋ ಬಂದರೆ ನಮ್ಮ ಇದೇ ಯುವ ಜನತೆ ಕಣ್ಣಿನ ಜೊತೆ ಬಾಯಿ ಬಿಟ್ಟು ನೋಡಿಯಾರು. 



ಎರಡನೇಸಲ - 'ವಿಮರ್ಷೆ'


ಯಾವ ದುಂಬಿಗೆ ಯಾವ ಹೂವು ಎಂಬ ಸಾಲಿನೊಂದಿಗೆ ಆರಂಭವಾಗುವ ಈ ಚಿತ್ರದಲ್ಲಿ ಮೊದಲಿಗೇ ಗಮನ ಸೆಳೆವುದು ಸಾಹಿತ್ಯಕೆ ,ಭಾವಕ್ಕೆ ನಾಟುವ ಮಿತವಾಗಿಯೂ ಇರುವ ಹಿತಕರವಾದ ಅನೂಪ್ ಸಿಳೀನ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ. ತಂದೆಯ ಸಾವಿನ ದಿನ  ತನ್ನ ಮದುವೆಯ ಬಗ್ಗೆ ಚಿಂತಿಸುವ ನಾಯಕಿ ಸಂಗೀತಾ ಭಟ್ ಅವರ ಪಾತ್ರ ಇಷ್ಟೊಂದು ಸ್ವಾರ್ಥಿಯೋ ಎಂದೆನಿಸಿದರೂ ವಾಸ್ತವ. ಕುಚೇಷ್ಟೆಯ ಹಲವು ಪೋಲಿ ಸಂಭಾಷಣೆಗಳು ಸನ್ನಿವೇಶಗಳು ಮೂಲ ಕಥೆಗೆ  ಪೂರಕವೇ ಆಗಿವೆ. ಆ ಕುಚೇಷ್ಟೆಯ ಸಂಭಾಷಣೆಯಲ್ಲಿ ಅದೆಷ್ಟೋ ಜನ ಒಪ್ಪದ ನೈಜತೆಯನ್ನು ಸರಾಗವಾಗಿ ಬಿತ್ತರಿಸುವ ಛಾತಿ ಗುರುಪ್ರಸಾದ್ ಅವರದ್ದು.


ಉದಾಹರಣೆಗೆ ಮನೋ ರೋಗ ತಜ್ಞ ಮತ್ತು  ವಿವಾಹಿತ ಮಹಿಳೆಯೊಂದಿಗಿನ ಮಾತುಕತೆಯಲ್ಲಿ ಆಕೆ ಹೊಂದಿರುವ ಬಹುಬಗೆಯ ದೈಹಿಕ  ಸಂಬಂಧಗಳ ಮಜಭರಿತ ಮಾತುಗಳು ನಗು ತರಿಸಿದ್ದು ಆಕೆ ನಾಯಕಿ ಅಲ್ಲವೆಂಬ ಖಾತ್ರಿ ಇಂದ. ನಾಯಕನಾಗಿ ಡಾಲಿ ಧನಂಜಯ ಅವರ ನಟನೆ ದೋಷರಹಿತ. ಸಾಂಪ್ರದಾಯಿಕ ಕಥನ ಶೈಲಿಯನ್ನು ಅಂದೇ ಮೂಲೆಗೆ ಕೂರಿಸಿದ್ದ ಗುರುಪ್ರಸಾದ ಅವರ ನಿರ್ದೇಶನ ಒಂದು ರೀತಿಯ ಮೀಸಲಾತಿ ಇಲ್ಲದೇ  ಸರ್ಕಾರಿ ಹುದ್ದೆ ಪಡೆವ ಮೆರಿಟ್ ವಿದ್ಯಾರ್ಥಿಯಂತೆ! ತಾಯಿ - ಮಗ - ಮಗನ ಪ್ರೇಯಸಿ  ಈ ಮೂವರ ಸಂಬಂಧದಲ್ಲಿನ  ಅಕ್ಕರೆ - ಪ್ರೀತಿ - ಮಮತೆ - ಪ್ರೇಮ ಮತ್ತು ಮೋಹವನ್ನು ಅನಗತ್ಯ ವೈಭವೀಕರಿಸದೇ ಕಥೆಯೇ ಅವುಗಳ ಭಾವೋದ್ವೇಗ ಮೂಡಿಸುವ ಕಾರ್ಯ ಮಾಡಿದ್ದು ಕಥೆಗಾರನ ಕ್ಷಮತೆಗೆ ಹಿಡಿದ ಕನ್ನಡಿಯಂತೆ. ಹಿರಿಯ ನಟಿ ಲಕ್ಷ್ಮಿ ಅವರ ತಾಯಿಯ ಪಾತ್ರ ಪ್ರೇಕ್ಷಕರಿಗೆ ಅವರವರ ತಾಯಿಯ ನೆನೆಪಿಸುವಷ್ಟು ಬಲವಾಗಿದೆ, ಒಂದು ರೀತಿಯಲ್ಲಿ ಈ ಚಿತ್ರಕ್ಕೆ ನಾಯಕ ನಾಯಕಿ ಎರೆಡೂ ಈ ಅಮ್ಮನ ಪಾತ್ರ ಎನ್ನಬಹುದು. “ ಪ್ರಾಣ ಹಿಂಡುವೆ ಓ ಸಖ , ನನ್ನ ಬಾಧೆ ಅರಿಯೋ ಓ ಸಖ “ ಎಂಬ ಹಿನ್ನೆಲೆ ಸಾಲಿನೊಂದಿಗೆ ಆರಂಭವಾಗುವ ಈ ಪ್ರೇಮ ಕಥನ , ಮೊದಲ ಮುತ್ತಿನ ಸನ್ನಿವೇಶ ತದನಂತರ ಮತ್ತೊಂದು ಮಗದೊಂದು ಸಲಿಗೆಯ ಮಾತು ಮತ್ತು ಮುತ್ತುಗಳ ಸುರಿಮಳೆಯೇ ಚಲನಚಿತ್ರದಲ್ಲಿದೆ , ಆದರೆ ಒಂದು ಕ್ಷಣವೂ ಅದು ಅಶ್ಲೀಲ ಎಂಬ ಭಾವನೆ ಪ್ರೇಕ್ಷಕನಲ್ಲಿ ಮೂಡದು ! - ಕಾರಣ ಬೇರೆ ಚಿತ್ರಗಳಂತೆ ಚುಂಬನಕ್ಕಾಗೇ  ಕಥೆಯಲ್ಲ ಇಲ್ಲಿ ಕಥೆಯಲ್ಲಿನ ಚುಂಬನ!

ಹೂವ ಸುರಿದೇನು , ಪ್ರೇಮ ಕುರುಡು ಹಾಡುಗಳ ಸಾಹಿತ್ಯ ಕೂಡ ಬರಹಗಾರ ಗುರುಪ್ರಸಾದರನ್ನು ಇನ್ನು ಪದೇ ಪದೇ ನೆನೆಪಿಸದೇ ಇದ್ದೀತೇ ? ಇನ್ನು ಅಂತಹ ಚಿತ್ರಸಾಹಿತ್ಯ ಅಪರೂಪವೇ !

ಪದೇ ಪದೇ ಸಂಧಿಸಿ ಮೋಹಿಸಲು ಹಪಹಪಿಸುತ್ತ  ಮೋಹಿಸುವ  ಪ್ರೇಮಿಗಳ ಹಲವು ಸನ್ನಿವೇಶಗಳು ಪೊಲಿಯೆನಿಸಿದರೂ ವಾಸ್ತವವಾಗಿ ಅದು ಮನುಷ್ಯಸಹಜ  ಎಂಬಂತೆ ಮನಮುಟ್ಟಿಸುವಲ್ಲಿ ನಿರ್ದೇಶಕ ಗೆದ್ದಿರುವ. 


Expose ಮಾಡುವುದೇ ರೊಮ್ಯಾನ್ಸ್ನ ಮುಕ್ಕ್ಯ ಅಂಗ ಎಂಬ ಹುಂಬ ನಟಿಯರ ಇಂದಿನ ಸಾಲಿನಲ್ಲಿ , ಸಂಗೀತಾ ಭಟ್ ಅವರ ಪ್ರೇಮ ಬರಿತ ನಟನೆ , ಪ್ರೇಮಾ೦ಕುರದ ಮಾದಕ ಸನ್ನಿವೇಶಗಳಲ್ಲಿ ಮೈಮೇಲಿನ ವಸನವ ಲೆಕ್ಕಿಸದೆ ಮೈಮಾಟವನ್ನೂ  ಮೆರೆವ  ಭಾವಪೂರ್ಣ ನಟನೆ, ಇಂದಿನ ನಟಿಯರಿಗೆ  ಒಂದು ತೆರನ ಮುಟ್ಟಲಾಗದ  ನಟನಾ ಮೈಲಿಗಲ್ಲಿನಂತೆ. Expose ಮಾಡಿದ ನಂತರ ಅದರ ಗುಂಗಲ್ಲೇ ಇದ್ದು ಮೂರು ಕಾಸಿನ ನಟನೆ ಮಾಡಲು ಬಾರದೇ ಇರುವ ಇಂದಿನ ನಟಿಯರಿಗೂ ಮತ್ತು ಅಂಗಾಂಗ ಪ್ರದರ್ಶಿಸಲೆಂದೇ   ಕಥೆ ಬರೆವ ಕೆಲವು ಬುಡರಹಿತ ಕಥೆಗಾರರೆನಿಸಿಕೊಂಡ ಹಣವಂತ ನಿರ್ಮಾಪಕರಿಗೆಲ್ಲಾ ಈ ಚಿತ್ರ ಕಲಿಕೆಯ ಹೊತ್ತಿಗೆ. 


ಕೊನೆಯಲ್ಲಿ ಮಗನ ಮೇಲಿನ ಮಮಕಾರವ , ಮಗ ಎಲ್ಲಿ ತನ್ನ ಒಂಟಿಯಾಗಿ ಬಿಟ್ಟನೋ ಎಂಬ ಚಿಂತೆಯಲ್ಲೂ , ಮಗನ ಪ್ರೀತಿಯ ಆತನಿಗೆ ದಕ್ಕಿಸುವ ಹಂಬಲದ ನಡುವೆ ತಾಯಿಯ ಶ್ರೇಷ್ಠತೆಯನ್ನು ಮಗನಿಗೆ ತೋರ್ಪಡಿಸುವ ಅಕ್ಕರೆಯ ತಾಯಿಯಾಗಿ ಲಕ್ಷೀ ಅವರು ಮನಮುಟ್ಟುತ್ತಾರೆ. 


ಅಮೇರಿಕ ಅಮೇರಿಕದಂತಹ ಕ್ಲಾಸಿಕ್ ಕನ್ನಡ ಚಿತ್ರಗಳ ಸಾಲಿಗೆ  ಇದು ಸೇರುತ್ತೆ ಎಂಬ ಅಭಿಪ್ರಾಯದೊಂದಿಗೆ , 


ಸಂಕ್ಷಿಪ್ತವಾಗಿ ಇಷ್ಟನ್ನು ಮಾತ್ರ  ಹೇಳುತ್ತಾ , ಪೂರ್ಣವಿರಾಮ. 



  • ಶ್ರೀನಿಧಿ ಭಟ್ 

Comments

Popular posts from this blog

೨೦೨೪ ರ ಟಾಪ್ ೧೦ ಕನ್ನಡ ಚಲನಚಿತ್ರಗಳು : Top 10 Kannada Movies of 2024

India-Pakistan : A Civilizational War | Shrinidhi Bhat