ಬೆಂಗಳೂರಲ್ಲಿ ಸಿಗುವ ಅರೆ ಬೆಂದ ಕನ್ನಡ |Reality of Kannada Horata

                  ಬೆಂಗಳೂರಲ್ಲಿ ಸಿಗುವ ಅರೆ ಬೆಂದ ಕನ್ನಡ 





ಕನ್ನಡದ ಹೋರಾಟ ಕೇವಲ ಸಾಮಾಜಿಕ ಮಾಧ್ಯಮ, ದಿನಪತ್ರಿಕೆಗಳ ಅಂಕಣ, ದೂರದರ್ಶನದ ಸಂದರ್ಶನಗಳಿಗಷ್ಟೇ ಸೀಮಿತವೇನೋ ಎನ್ನುವಷ್ಟು ಕನ್ನಡದ ಹೋರಾಟ ತಲುಪಿರುವುದು ವರ್ಣನಾತೀತ.ಕೇವಲ ಭಾಷೆಯನ್ನೇ ವಿಷಯದ ಮಿತಿಯಾಗಿಸಿ ಒಮ್ಮೆ ಕಣ್ಣು ಹಾಯಿಸುವುದಾದರೆ ವಾಸ್ತವತೆಯನ್ನು ಬದಿಗೊತ್ತದೇ ಕರುನಾಡ ರಾಜಧಾನಿ ಬೆಂಗಳೂರಿನಲ್ಲಿ ಎಲ್ಲೆಲ್ಲಿ ಕನ್ನಡದ ಕಂಪು ಉಳಿದಿದೆ ಎಂಬುದು ಒಂದು ಸಂದು ಹೋದ ಕಾಲದ ಮರೆತ ಪದ್ಯವಾದರೂ ಹೊಸ ತಾಳವ ಮೇಳೈಸಿ ಮತ್ತದೇ ಪದ್ಯವ ಇಂಪಾಗಿ ಹಾಡುವ ಅವಶ್ಯಕತೆ ಇಂದಿದೆ.

ಬೆಂಗಳೂರಿನ ಒಂದು ಹೆಸರಾಂತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸುಮಾರು 14 ವರ್ಷಗಳಿಂದ ವೃತ್ತಿ ಜೀವನ ಸವೆಸುತ್ತಿರುವ ಉತ್ತರ ಭಾರತ ಮೂಲದ ಉಪನ್ಯಾಸಕಿ ಒಬ್ಬರು ತುಂಬಿದ ತರಗತಿಯಲ್ಲಿ ತಾನೇಕೆ ಕನ್ನಡ ಕಲಿಯಬೇಕು? ಅದರ ಅವಶ್ಯಕತೆ ಆದರೂ ತನಗೇನಿದೆ ಎಂದಾಗ, ತರಗತಿಯಲ್ಲಿದ್ದ ಅರ್ಧದಷ್ಟು ಕನ್ನಡಿಗ ವಿದ್ಯಾರ್ಥಿಗಳು ತುಟಿಪಿಟಕ್ ಎನ್ನಲಿಲ್ಲ!

ಎನ್ನಲಿಲ್ಲಯೆಂದೆನ್ನುವ ಬದಲು ಮಾತನಾಡರು ಎಂದರೆ ಅದು ಉತ್ಪ್ರೇಕ್ಷೆಯಂತೂ ಅಲ್ಲವೇ ಅಲ್ಲ.


ಅಚ್ಚ ಕನ್ನಡವನ್ನು ಅಥವಾ ಯಾವುದೇ ಭಾಷೆಯನ್ನು ಆಮೂಲಾಗ್ರವಾಗಿ ಅಲ್ಲದಿದ್ದರೂ ತಕ್ಕಮಟ್ಟಿಗೆ ಕಲಿಯುವ ಅವಶ್ಯಕತೆಯಾದರೂ ಏನು ಎಂಬುದು ಇಂದಿನ ಮೆಟ್ರೋ ನಗರಗಳಲ್ಲಿರುವ ಅದೆಷ್ಟೋ ಯುವಕ ಯುವತಿಯರ ಮನೋಭಾವ. 

ಇಂತದೇ ಭಾಷೆಯ ಸಹಾಯವಿಲ್ಲದೇ ನಾವೀಗ ತಿಂಗಳಿಗೆ ಲಕ್ಷ ಲಕ್ಷ  ಎಣಿಸುತ್ತಿಲ್ಲವೇ ?,ಎಂಬುದು ಅವರಲ್ಲಿ ಈ ತೆರನ ಮನೋಭಾವ ರೂಪಗೊಳ್ಳಲು ಮುಖ್ಯ ಕಾರಣವಿರಬಹುದು. ಇವರಲ್ಲಿ ಪದೇಪದೇ ಕಾಣಸಿಗುವ ಜ್ವಲಂತ ಸಮಸ್ಯೆಯೊಂದನ್ನು ಸಣ್ಣ ಉದಾಹರಣೆ ಮೂಲಕ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡೋಣ. ನಾ ಕಂಡಂತೆ ಬೆಂಗಳೂರಿಗಳೇ ಆದ ನನ್ನ ಸಹೋದ್ಯೋಗಿ ಒಬ್ಬಳು, ಹುಟ್ಟಿ ಬೆಳೆದದ್ದು ಎಲ್ಲವೂ ಬೆಂಗಳೂರಿನಲ್ಲಿ ಆದರೂ ಆಕೆ ತಮ್ಮನೊಂದಿಗೆ ಉರ್ದು ತಾಯಿಯೊಂದಿಗೆ ತೆಲುಗು ಮತ್ತು ತಂದೆಯೊಂದಿಗೆ ಹಿಂದಿಯಲ್ಲಿ ಮಾತನಾಡುತ್ತಾಳೆ. ನಮ್ಮೊಂದಿಗೆ ಇಂಗ್ಲೀಷಿನಲ್ಲಿ ಹರಟ್ಟುತ್ತಾಳೆ, ಆದರೆ ಈಕೆಯಂತವರಲ್ಲಿ ತನ್ನಲ್ಲಿ ಮೂಡಿದ ಭಾವನೆಯನ್ನು ಯಥಾವತ್ತಾಗಿ ಯಾವ ಭಾಷೆಯಲ್ಲೂ ವ್ಯಕ್ತಪಡಿಸುವ ಕನಿಷ್ಠ ಸಾಮರ್ಥ್ಯವೂ ಇರುವುದಿಲ್ಲ. ತನ್ನಲ್ಲಿ ಉಂಟಾದ ಭಾವನೆಯನ್ನು ಅಭಿವ್ಯಕ್ತ ಪಡಿಸಲು ಯಾವ ಪದ ಬಳಸಬೇಕು ಎಂದು ತಿಳಿಯದೇ ಎಲ್ಲವಕ್ಕೂ ತಮಗೆ ತಿಳಿದ ಒಂದೋ ಏರೆಡೋ ಪದವನ್ನೇ ಬಳಸಿ ನುಡಿಯುತ್ತಾರೆ. ಇದೊಂದು ಸಮಸ್ಯೆ ಎಂದು ತಿಳಿಯದೆ ಇರುವುದೇ ಅವರ ಮೂಲ ಸಮಸ್ಯೆಯಾಗಿದೆ.

ಉದಾಹರಣೆಗೆ ಇದು ಬೇಸರ, ಇದು ಪ್ರೇಮ ಇದು ನಿರಾಳತೆ ಇದು ನಿರ್ಲಿಪ್ತತೆಯ ಭಾವನೆ ಎಂಬುದು ಆಕೆಗೆ ತಿಳಿದಿಲ್ಲ, ಭಾಗಶಃ ಆಕೆ ಎಲ್ಲಾ ಭಾವನೆಯನ್ನು ಮನದ ನೋವು ಎಂಬಂತೆ ನಂಬಿರುತ್ತಾಳೆ ಹಾಗೆಯೇ ಬಿಂಬಿಸುತ್ತಾಳೆ ಕೂಡ! ಎಂಥ ವಿಪರ್ಯಾಸ! ಅಲ್ಲವೇ? ಇದೇನು ಒಬ್ಬಿಬ್ಬರ ಸಮಸ್ಯೆಯೇ? ನಾ ಕಂಡಂತೆ ಸುಮಾರು 30 ಶೇಕಡ ಬೆಂಗಳೂರಿನ ಯುವಕ ಯುವತಿಯರ ಜ್ವಲಂತ ಭಾಷಾ ಸಮಸ್ಯೆ ಇದು.ಈ ಕಾರಣದಿಂದಲೇ ಅದೆಷ್ಟೋ ಕಾರ್ಯಕ್ಕೆ ಕ್ರಿಯಾಪದವಾಗಿ ಇವರೆಲ್ಲಾ ಒಂದೇ ಪದವ ಬಳಸುತ್ತಾರೆ. ಉದಾಹರಣೆಗೆ ಚರ್ಚೆಯೊಂದು ನಡೆಯುತ್ತಿರಲು ಒಬ್ಬಾತ ಕುಚೇಷ್ಟೆಯೋ, ಇನ್ನೊಬ್ಬ  ವ್ಯಂಗ್ಯವಾಗಿಯೂ,ಮಗದೊಬ್ಬ ವಿಷಯಕ್ಕೆ ತನ್ನ ಅಸಮ್ಮತಿಯನ್ನು ಸೂಚಿಸಿ ಮಾತನಾಡಿದರೆ, ಆಗ ನನ್ನ ಸಹೋದ್ಯೋಗಿಯಂತವಳು ಅಲ್ಲಿ  ಒಬ್ಬಳಿದ್ದರೆ ಅವಳು ನಿಮಗೆಲ್ಲಾ ಅಹಂಕಾರ ಎಂದು ಮೇರು ಧ್ವನಿಯಲ್ಲಿ ಕೂಗಿ ನಿರ್ಣಯಿಸಿ ಬಿಡುತ್ತಾಳೆ!. ಪಾಪ ಆಕೆಗೆ ಗೊತ್ತಿರುವುದು ಅದೊಂದೇ ಪದ!

ಎಂಬಲ್ಲಿಗೆ ಬೇರೆಲ್ಲಾ ಭಾವನೆಯ ಅಭಿವ್ಯಕ್ತಿ ಆಕೆಯ ಬದುಕಿನಲ್ಲಿ ಸತ್ತಂತೆ ಅಲ್ಲವೇ?

ಇಂತಹ ಅದೆಷ್ಟು ಮಂದಿ ಇರುವರು ಮತ್ತು ಅವರಿಂದ ಅನ್ನಿಸಿಕೊಂಡ ಮಹನೀಯರು ಮತ್ತು ಮಹಾಶಯರು ಅದೆಷ್ಟೋ ಮಂದಿ. ತಪ್ಪಾದ ಪದ ಬಳಕೆಯಿಂದ ಘಾಸಿಕೊಂಡ ಸಂದರ್ಭಗಳೆಷ್ಟು! ಇನ್ನು ಅದರ ಉಪ ಸಂದರ್ಭಗಳು ಮತ್ತದರ ಪರಿಣಾಮಗಳು ಊಹೆಗೂ ಮೀರಿದ್ದು.

ಅಂತರಾಳದಲ್ಲಿರುವ ಭಾವನೆಗಳನ್ನು ಹೊರಹಾಕಲು ಬಾರದ ಇವರುಗಳು ಖಿನ್ನತೆಗೆ ಜಾರಿದ್ದೂ ಉಂಟು.

 ಐಟಿಬಿಟಿಯಲ್ಲಿ ಕನ್ನಡಿಗರ ಕೆಲಸಗಳನ್ನು ಉತ್ತರ ಭಾರತದವರು ಕಸಿಯುತ್ತಿದ್ದಾರೆ ಎಂಬ ಬಲವಾದ ಕೂಗಿದೆ. ಅದರ ಸತ್ಯಾಸತ್ಯತೆಯ ಗೋಜಿಗೆ ಈಗ ಹೋಗದೆ ಬೆಟ್ಟದಂತಿರುವ ಆ ವಿಷಯದಲ್ಲಿ ಮರದ ರೆಂಬೆಯೊಂದರ ಉದಾಹರಣೆ ನೋಡೋಣ, ಐಟಿ ಸರ್ವಿಸ್ ಕ್ಷೇತ್ರದ ಒಂದು ಕಂಪನಿಯಲ್ಲಿ, ಅದರ ಬೆಂಗಳೂರಿನ ಕಚೇರಿಯೊಂದರಲ್ಲಿ ಬಿಡುವಿನ ವೇಳೆಯಲ್ಲಿ ನಾಲ್ಕೈದು ಅಪ್ಪಟ ಪಟ್ಟಣ ಕನ್ನಡಿಗರು ತಮ್ಮದಲ್ಲದ ಇಂಗ್ಲೀಷ್ ನ ಉಚ್ಚಾರಣೆಯನ್ನು ತಾವು ಸ್ವದೇಶದವರಲ್ಲವೇನೋ ಎಂಬ ಸಂಶಯ ಕೇಳುಗರಿಗೆ ಬರುವಂತೆ ಹರಟುತ್ತಿದ್ದರು, ಅವರ ಪಕ್ಕದಲ್ಲಿ ಹತ್ತು ಜನ ತರುಣ ತರುಣಿಯರ ಗುಂಪೊಂದು ವಿರಾಮದ ಚಹಾ ಹೀರುತ್ತಾ, ಮಲಯಾಳಂನಲ್ಲಿ ಕೇಕೆ ಹಾಕಿ ಬಾಲ್ಯದ ಸ್ನೇಹಿತರಂತೆ ನಗುತ್ತಾ ಹರಟುತ್ತಿದ್ದರು ಅದನ್ನು ನೋಡಿದ ನಮ್ಮವರು ಅವರನ್ನು ಅವರ ಭಾಷಾ ಪ್ರೇಮವನ್ನು ಅದೆಷ್ಟು ಮೆಚ್ಚಿಕೊಂಡರೆಂದರೆ ಅವರಲ್ಲಿಯೇ ಒಬ್ಬರಾದರು, ಮಲಯಾಳಂ ಕಲಿಯಬೇಕೆಂದು ಉತ್ಸುಕರೂ ಆದರು! . ಇನ್ನು ಅಲ್ಲೆಲ್ಲೋ ಒಮ್ಮೆ ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷಗಾನವೋ, ರಂಗಾಯಣದಲ್ಲಿ ನಾಟಕವೋ, ಕವಿ ಗೋಷ್ಠಿಗಳು, ಕೆಲವು ರಾಜಕೀಯ , ರಾಜಕೀಯವಲ್ಲದ ಸಭೆ ಸಮಾರಂಭಗಳು, ಕನ್ನಡ ಪುಸ್ತಕ ಬಿಡುಗಡೆ ಸಭೆಗಳು, ಭಾಷಣಗಳು ಇವು ಅಲ್ಲಲ್ಲಿ ಅಚ್ಚ ಕನ್ನಡ ಕೇಳ ಸಿಗುವ ಕೆಲವೇ ಕೆಲವು ಸಂದರ್ಭ ಮತ್ತು ಸ್ಥಳಗಳು.


ಬೆಂಗಳೂರಿನಲ್ಲಿ ಅಚ್ಚ ಕನ್ನಡ ಕೇಳುವುದು ಮರುಭೂಮಿಯಲ್ಲಿ ನೀರು ಸಿಕ್ಕಂತೆ ,ನೀರಾದರೂ ಸಿಕ್ಕೀತು ಬೆಂಗಳೂರಿನಲ್ಲಿ ಅಚ್ಚ ಕನ್ನಡ ಕಷ್ಟ ಕಷ್ಟ!ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಅದರಲ್ಲೂ ಕನ್ನಡದ ಮಾಧ್ಯಮಗಳು ಎಂದು ಬಿಂಬಿಸಿಕೊಳ್ಳುವ ಯೂಟ್ಯೂಬ್ ವಾಹಿನಿಗಳಲ್ಲಿ ಕನ್ನಡದಲ್ಲಿ ವಿಷಯದ ಒಕ್ಕಣೆಯನ್ನೇ ತಪ್ಪಾಗಿ ಬರೆವ ಕನ್ನಡದ ವಿದ್ವಾಂಸರಿಗೇನು ಕೊರತೆ ಇಲ್ಲ!

ಇವೆಲ್ಲ ಒಂದೆಡೆಯಾದರೆ ಇನ್ನು ಕನ್ನಡದ ಅಸ್ಮಿತೆ ಎಂದು ಹೇಳುತ್ತಾ ರಾಜಕೀಯ ಮಾಡುವವರು ಇನ್ನೊಂದೆಡೆ.ಕನ್ನಡ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಕೊಟ್ಟರೆ ಭಾಷೆ ಉಳಿದೀತು ಆದ್ದರಿಂದ ಅದನ್ನು ಕಡ್ಡಾಯಗೊಳಿಸಬೇಕು ಎಂಬ ವಾದವಿದೆ. ಉನ್ನತ ವ್ಯಾಸಂಗದಲ್ಲಿ ಎಲ್ಲಾ ವಿಷಯಗಳನ್ನು ಕನ್ನಡದಲ್ಲೇ ಕಲಿತರೆ ಅದು ಉಪಯುಕ್ತವೇ? , ಉದ್ಯೋಗವಕಾಶಗಳೇನು ? . ಹಾಗಾದರೆ ಪರಿಹಾರವೇನು ಎಂದು ಒಮ್ಮೆ ಚಿಂತಿಸಿ ನೋಡಿದರೆ ಕರ್ನಾಟಕದಲ್ಲಿ ಪ್ರಾಥಮಿಕದಿಂದ ತೊಡಗಿ ಉನ್ನತ ವ್ಯಾಸಂಗದವರೆಗೂ ಒಂದು ಭಾಷೆಯಾಗಿ ಕನ್ನಡವನ್ನು, ಪ್ರಥಮ ಭಾಷೆಯಾಗಿ ಕಡ್ಡಾಯಗೊಳಿಸಿದರೆ ಭಾಷೆಯೂ ಉಳಿದೀತು ಮತ್ತು ತಾರ್ಕಿಕವಾಗಿಯೂ ಸರಿಯೆನಿಸೀತು. ವೃತ್ತಿಪರ ಕೋರ್ಸುಗಳಲ್ಲಿ ಎಲ್ಲಾ ವಿಷಯಗಳ ಪಠ್ಯಗಳನ್ನು ಕನ್ನಡದಲ್ಲಿ ಕಲಿಸುವ ಅಸಮಂಜಸ ತರ್ಕದ ಬದಲು ಕನ್ನಡವನ್ನು ಒಂದು ಭಾಷಾ ವಿಷಯವಾಗಿ ಮಾತ್ರ ಜಾರಿಗೊಳಿಸಲು ಸರ್ಕಾರಕ್ಕೂ ಸುಲಭವಾದೀತು. ಬೇರೆ ರಾಜ್ಯಗಳಿಂದ ವಲಸೆ ಬಂದು ಕರ್ನಾಟಕದಲ್ಲಿ ನೆಲೆಸಿ ತಮ್ಮ ಮಕ್ಕಳಿಗೆ ಫ್ರೆಂಚ್ ಜರ್ಮನ್ ಜಪಾನೀಸ್ ಕಲಿಸುವ ಜೊತೆಗೆ ಕನ್ನಡವನ್ನು ಕಡ್ಡಾಯವಾಗಿ ಕಲಿಸುವುದು ಪಾಲಕರಿಗೆ ಅಷ್ಟೇನು  ಕಷ್ಟವಂತೂ ಅಲ್ಲ, ಮಕ್ಕಳಿಗೆ ಗೋಬಿ ಮಂಚೂರಿ ತಿನ್ನಿಸುವ ಜೊತೆಗೆ ಮೊಸರನ್ನವನ್ನೂ ಕೊಟ್ಟಂತೆ!  ಹೀಗೆ ಬಾಲ್ಯದಿಂದ ಕನ್ನಡ ಭಾಷೆ ಅಭ್ಯಾಸವಾದಲ್ಲಿ ಅದು ಮುಂದೆ ಉಳಿದೀತೇ ಹೊರತು ಕನ್ನಡದಲ್ಲಿ ಮೊದಲು ಹೆಸರು ಬರೆದಿಲ್ಲ ಎಂದು ಅಂಗಡಿ ಶಾಲೆ ಮತ್ತಿತರ ಸಂಸ್ಥೆಗಳ ಫಲಕಗಳನ್ನು ತೆರವುಗೊಳಿಸಿ ಗಲಾಟೆಯೆಬ್ಬಿಸುವುದು ಅರ್ಥಹೀನ. ಮಾತೃಭಾಷೆಯನ್ನು ಪೂರ್ಣಪ್ರಮಾಣದಲ್ಲಿ ತಿಳಿದರೆ ಆ ವ್ಯಕ್ತಿ ಸುಲಭವಾಗಿ ಅನ್ಯ ಭಾಷೆಯನ್ನು ಕಲಿಯಬಲ್ಲ, ಇಲ್ಲದಿದ್ದರೆ ಎಲ್ಲವೂ ಅರ್ಧಚಂದ್ರನಂತೆ.ಇಂದಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳಂತೆ !

ಭಾಷಾ ಪ್ರೇಮವು ರಾಜಕೀಯವಾಗಿ ಭಾಷೆಯ ಹೆಸರಿನಲ್ಲಿ ಸ್ವಧರ್ಮವ ದೂಷಿಸುವ ಅಥವಾ ಧಿಕ್ಕರಿಸುವ ಭಾಷೆಯಾಗದೆ, ಕನ್ನಡವು ಕನ್ನಡವ ಕನ್ನಡಿಸುತಿರಲಿ.

    -ಶ್ರೀನಿಧಿ ಭಟ್, ಕೊಂಡಳ್ಳಿ






    Comments

    Popular posts from this blog

    ೨೦೨೪ ರ ಟಾಪ್ ೧೦ ಕನ್ನಡ ಚಲನಚಿತ್ರಗಳು : Top 10 Kannada Movies of 2024

    ನಿರ್ದೇಶಕ ಗುರುಪ್ರಸಾದ್ ನೆನೆಪಿನಲ್ಲಿ - ಎರಡನೇಸಲ | In memory of Director Guruprasad - EradaneSala

    India-Pakistan : A Civilizational War | Shrinidhi Bhat