Movie Review|ವಿಮರ್ಶೆ ಚಲನಚಿತ್ರ - ಧರಣಿ ಮಂಡಲ ಮಧ್ಯದೊಳಗೆ
ಚಲನಚಿತ್ರ ವಿಮರ್ಶೆ - ಧರಣಿ ಮಂಡಲ ಮಧ್ಯದೊಳಗೆ
ಹಾಸ್ಯ ದೃಶ್ಯಗಳನ್ನು ವಿನಾಕಾರಣ ಪೋಣಿಸದೇ , ಕಥೆಯಾಗಿಯೇ ಬಳಸಿಕೊಂಡದ್ದು ಪ್ರೇಕ್ಷಕರ ಗಮನವನ್ನು ಬೇರೆಡೆಗೆ ಹರಿಯಲು ಬಿಡದು.
ರೋಣದ ಬಕ್ಕೇಶ್ ಮತ್ತು ಕಾರ್ತಿಕ್ ಚನ್ನೋಜಿ ರಾವ್ ಅವರ ಸಂಗೀತ ಹೊಸತನದಿಂದ ಕೂಡಿದ್ದು, ಪ್ರತೀ ಟ್ಯೂನಿನಲ್ಲೂ ಕಥಾ ಭಾವನೆಯ ಚಲನಕ್ಕೆ ಇಂಧನದಂತಿದೆ. ಹಾಡುಗಳೆಲ್ಲವೂ ಉತ್ತಮವಾಗಿ ಮೂಡಿ ಬಂದಿದೆ, ಹಿನ್ನೆಲೆಯಲ್ಲಿ ಬರುವ ಹಾಡುಗಳು ಮತ್ತು ಸಾಹಿತ್ಯ ಪ್ರೇಕ್ಷಕನ ಜೀವನಕ್ಕೆ ಹತ್ತಿರವಾಗುತ್ತಾ ಕಾಲಘಟ್ಟಗಳ ನೆನಪಿಸೀತು ! ಹೊಟ್ಟೆಪಾಡಿಗಾಗಿ ಮಗಳನ್ನೇ ಮಾರುವ ತಂದೆ ಒಂದೆಡೆಯಾದರೆ, ಕಳೆದು ಹೋದ ತಂದೆ ತಾಯಿಗಾಗಿ ಏನನ್ನು ಲೆಕ್ಕಿಸದೆ ಹುಡುಕುವ ಮಗ ಇನ್ನೊಂದು ಕಡೆ, ಸಾಯಲು ಆಗದೆ ಕುಡಿಯಲೂ ಆಗದಿರುವ ಪಾತ್ರದಿಂದ ಹಾಸ್ಯವಾಗಿ ಪ್ರೇಮಿಯ ದುಃಖವ ಹೊರಹಾಕಿದ್ದಾರೆ. ಇನ್ನೇನು ಎಲ್ಲಾ ಸರಿಹೋಯಿತು ಎಂಬಾಗ ಮತ್ತೆ ಸಂಕೀರ್ಣಗೊಳ್ಳುವ ಸನ್ನಿವೇಶಗಳು, ಹೀಗೆ ಬರುವ ಸನ್ನಿವೇಶಗಳು ಎಲ್ಲವೂ ಸಹಜ, ಮತ್ತು ಕೃತಕವಲ್ಲ ಎಂಬ ಭಾವನೆ ಪ್ರೇಕ್ಷಕನಲ್ಲಿ ಮೂಡುವುದೇ ಚಿತ್ರಕಥೆಯ ಸಾಮರ್ಥ್ಯ.
ಹಣೆಬರ ವಿದ್ದಂತೆ ಸಾಗಬೇಕು , ಈ ಜಗತ್ತಿನಲ್ಲಿ ನಡೆಯುವುದೆಲ್ಲವೂ ಕಾಕತಾಳಿಯ ಎಂಬ ನಿರ್ದೇಶಕರು ಕೊನೆಯಲ್ಲಿ,'ಧರಣಿ ಮಂಡಲ ಮಧ್ಯದೊಳಗೆ ಇಲ್ಲಿ ಎಲ್ಲರ ಜೀವನ ಮೇಲೆ ಕೆಳಗೆ, ಸಿಗಬೇಕಾದ್ದು ಸಿಕ್ಕೇ ಸಿಗುವುದು ನಮಗೇ ..' ಎಂಬಂತೆ ಮುಗಿಸಿದ್ದು ಒಂದಕ್ಕೊಂದು ವಿರೋಧಾತ್ಮಕವಾದರೂ, ಪಾತ್ರಗಳ ಸಾಮರ್ಥ್ಯವೇ ಅದಕ್ಕೆ ಸಮರ್ಥನೆ.
ದೊಡ್ಡ ಹೊಂಡದಲ್ಲಿ ಬಿದ್ದಿದ್ದ ಎಲ್ಲಾ ಪಾತ್ರಗಳು ಸುಕ್ಷೇಮವಾಗಿ ಪಾರಾಗಿ, ಗುಂಡಿಯಿಂದ ಅದೆಷ್ಟೋ ದೂರದಲ್ಲಿದ್ದ ವ್ಯಕ್ತಿ ಬಿದ್ದು ಪಾರಾಗದೆ ಹೋದದ್ದು ಕಾಕತಾಳಿಯವೋ, ಅಥವಾ ಆ ವ್ಯಕ್ತಿ ಬಿದ್ದರೂ ಎದ್ದರೂ ಸಾಂಬಾರಿನ ರುಚಿಗೇನು ಆಗದು ಎಂಬ ನಿರ್ದೇಶಕರ ತೀಕ್ಷ್ಣತೆಯೋ? ಅದ ತಿಳಿಯಲು ನೀವು ಚಲನಚಿತ್ರವ ನೋಡಲೇಬೇಕು.
ಶ್ರೀನಿಧಿ ಭಟ್ ,ಕೊಂಡಳ್ಳಿ.
Comments
Post a Comment