Movie Review - Hondisi Bareyiri | ಹೊಂದಿಸಿ ಬರೆಯಿರಿ - ಸಿನಿ ವಿಮರ್ಶೆ
ಹೊಂದಿಸಿ ಬರೆಯಿರಿ - ಸಿನಿ ವಿಮರ್ಶೆ
ಇಂಜಿನಿಯರಿಂಗ್ ಕಾಲೇಜ್ಗಳಲ್ಲಿನ ಸನ್ನಿವೇಶಗಳನ್ನು ತೀರಾ ವೈಭವೀಕರಿಸದೇ ಇದ್ದದ್ದೇ (ಉದಾಹರಣೆಗೆ ಇಂಜಿನಿಯರಿಂಗ್ನ ಫೇರ್ವೆಲ್ ಸಮಾರಂಭ), ವಾಸ್ತವಕ್ಕೆ ತೀರಾ ಹತ್ತಿರದಂತಿರಲು ಕಾರಣ. ಐಷಾನಿ ಶೆಟ್ಟಿ ಅವರ ಮಾತಿನ ಗ್ರಾಮ್ಯ ಕೆಲವೊಮ್ಮೆ ಕಿರಿಕಿರಿ ಎನಿಸಿದರೂ, ಪ್ರೀತಿಯನ್ನೇ ನೆಚ್ಚಿ, ಪ್ರಿಯಕರನನ್ನೇ ಮದುವೆಯಾಗಿ ಉದ್ಯೋಗ ಮತ್ತು ಸಂಸಾರಗಳ ನಡುವೆ ಉದ್ಭವಿಸಿ ಪಿಸುಗುಟ್ಟುವ ಸಮಸ್ಯೆಗಳಿಗೆ ಸ್ವರವಾಗುವಾಗಿನ ನಟನೆಯಿಂದ, ಪಾತ್ರಕ್ಕೆ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುತ್ತಾರೆ.
ಜೊತೆಗಿದ್ದರೆ ಫೋಕಸ್ ಮಾಡಲು ಅಸಾಧ್ಯ ಎಂಬ ಕಾರಣಕ್ಕೆ ಕೆಲವು ಕಾಲ ಓದಿನ ಸಮಯದಲ್ಲೂ ಮದುವೆಯ ನಂತರದಲ್ಲೂ ದೂರವಿದ್ದು ಸಾಧಿಸುವ ಐಶಾನಿಯವರ ಪಾತ್ರ, ಭಾವಗಳ ಬಂಧಿಯಾಗಿ ನಮ್ಮ ಗುರಿ ಮಂಜಾದಾಗ ಸ್ವಾರ್ಥಿಯಾಗುವುದು ಸ್ವಾರ್ಥವಲ್ಲ ಎಂಬ ಒಳನೋಟದ ಚಿಂತನೆಯನ್ನು ಬಿತ್ತರಿಸುತ್ತದೆ.
ಪ್ರೀತಿಯು ಚೆಲುವಿಗೆ ಮನಸೋತು ನೋಟದಿಂದ ಆರಂಭಗೊಳ್ಳುವ ಆಕರ್ಷಣೆಯೋ? ಅಥವಾ ಒಡನಾಟದಿಂದ ಸ್ಪುರಿವ ಒಲುಮೆಯೋ?, ಎಂಬ ಎರಡು ವ್ಯತಿರಿಕ್ತ ಅಭಿಪ್ರಾಯವನ್ನು ಸಹಜವೆಂಬಂತೆ ಪೋಣಿಸಿದ್ದು ನಿರ್ದೇಶಕರ ಪರಿಕಲ್ಪನೆಯ ಶಕ್ತಿಗೊಂದು ಕುರುಹು.
ಇನ್ನೇನು ತನ್ನೊಂದಿಗೆ ಬಾಳ ಸವೆಸುವಾಕೆಗಾಗಿ, ಆಕೆಯ ಪ್ರಿಯಕರನೊಂದಿಗೆ ಬೇಟಿಗೆ ಮುಕ್ತನಾಗಿ ಸಹಕರಿಸುವ ಚಿತ್ತದ ಪ್ರವೀಣ್ ತೇಜ್ ರವರ ಪಾತ್ರ ಕೇವಲ ಚಿತ್ರದಲ್ಲಷ್ಟೇ ಆದರ್ಶಪ್ರಾಯ ಎಂದೆನಿಸಿತು!
'Gultoo' ನವೀನ್ ಶಂಕರ್ ಮತ್ತು ಕೆಜಿಎಫ್ ಖ್ಯಾತಿಯ ಅರ್ಚನಾ ಜೋಯಿಸ್ ರವರ ಕಥೆಯ ಕೊನೆಯ ತಿರುವಿನ ಕಥನ ಒಡನಾಟದ ಸವಿಯ ಸ್ಫುರಿಸಿದ್ದು ಮಾತ್ರ ಮನಮುಟ್ಟುವಂತಿದೆ. ಹಿನ್ನೆಲೆಯಲ್ಲಿ ಹಾದು ಹೋಗುವ ಹಾಡುಗಳ ಸಾಹಿತ್ಯವು ಕಥೆ ಬೀರುವ ಪರಿಣಾಮಕ್ಕೆ ಮೊಸರನ್ನಕ್ಕೆ ಅಪ್ಪೆ ಮಿಡಿ ಉಪ್ಪಿನಕಾಯಿಯಂತೆ ಇನ್ನಷ್ಟು ಭಾವವ ಎರೆಯುತ್ತದೆ.
ಆ ಕ್ಷಣಕ್ಕೋ, ಸಂದರ್ಭದ ಮನಸ್ಥಿತಿಗೋ, ಅನುಭವಿಸಿದ ವಿರಹಕ್ಕೋ ಮನವು ಪ್ರಣಯಕ್ಕಿಂತ ಮಿಗಿಲಾಗಿ ಪ್ರೇಮ ಬಾಂಧವ್ಯವ ಬಯಸೀತು, ಎಂಬ ಕೊನೆಯ ಪುಟದೊಂದಿಗೆ ಹೊತ್ತಿಗೆಯ ಹಿನ್ನುಡಿ ಬರೆಯುವ ನಿರ್ದೇಶಕರು, ಮುಖ್ಯ ಪುಟದ ಅಂಶವೊಂದನ್ನು ಅಳಿಸಿದರೇ ಕಥೆಯ ಭಾವಕ್ಕೊಂದು ತಿಲಕದಂತೆ ಎಂದು ಇರಬಹುದಾದ ನಿರ್ದೇಶಕರ ತರ್ಕ ಸಹಜವಾಗಿಯೇ ಅಸಹಜವನಿಸಿತು. ಐದರಲ್ಲಿ ನಾಲ್ಕು ಪದವ ಹೊಂದಿಸಿದ ನಿರ್ದೇಶಕರು, ಕೊನೆಯ ಪದ ಹೊಂದಿಸಿಯೂ ಅದ ಬರೆವಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಮಾಡಬೇಕೆಂದೇ ಮಾಡಿದರೇನೋ ಎಂದೆನಿಸಿತು!
ಇಲ್ಲ ಅದ ಆ ತೆರನ ಹೊಂದಿಸಿರುವುದೇ ಸರಿಯೋ? ತಿಳಿಯಲು ಚಲನಚಿತ್ರವ ವೀಕ್ಷಿಸಿ.
ಶ್ರೀನಿಧಿ ಭಟ್, ಕೊಂಡಳ್ಳಿ
Comments
Post a Comment