ಜಾತಿ,ಮತ,ಬಿಟ್ಟಿ ಭಾಗ್ಯಗಳು ಮತ್ತು ರಾಜಕೀಯ!| Religion&Politics,Freebies&Votes,Secularism&Discrimination_Go Hand in hand

 ಜಾತಿ ರಾಜಕಾರಣದಲ್ಲಿ ಅಗ್ರಪಂಕ್ತಿ  ಕಾಯ್ದುಕೊಳ್ಳುವ ಕುಮಾರ ಸಿದ್ದರು ಒಂದೆಡೆಯಾದರೆ, ಎಲ್ಲವ ಉಚಿತದಿ ನೀಡುವ ಕ್ರೇಜ್ ಇನ್ನೊಂದೆಡೆ! 


ಆಯಾ ಪ್ರದೇಶದಲ್ಲಿ ಯಾವ ಜಾತಿಯವರು ಹೆಚ್ಚಿರುವರೊ ಅವರಲ್ಲೇ ಒಬ್ಬಾತನಿಗೆ ಚುನಾವಣೆಗೆ ನಿಲ್ಲಲು ಟಿಕೆಟ್ ಕೊಡಿ ಎಂದು ದೇಶದ ಪ್ರಪ್ರಥಮ ಚುನಾವಣೆಯಲ್ಲಿ ತನ್ನ ಸಂಗಡಿಗರಿಗೆ ಕರೆ ಕೊಟ್ಟಿದ್ದನಂತೆ ಒಬ್ಬಾತ, ಆತ ಒಬ್ಬ ಮಹಾತ್ಮನ ಸ್ನೇಹಿತನಂತೆ, ಅಲ್ಲಿಂದಲೇ ಶುರುವಾಯಿತು ಎಂದು ಆರೋಪ ಹೊರಿಸಿಯೂ ಹೊರಿಸದವರಂತೆ ಇದ್ದರೆ ನಾವು ಕ್ಷೇಮ! 

ಇಂದಿನ ಅನೇಕ ಯುವಕ ಯುವತಿಯರು ತಾವು ಪೊಲಿಟಿಕಲಿ ನ್ಯೂಟ್ರಲ್, ಆದರೂ ಈ ಪಕ್ಷಕ್ಕೆ ತಮ್ಮ ಬೆಂಬಲ ಏಕೆಂದರೆ ಅದು ಜಾತ್ಯಾತೀತ(ಜಾತಿ+ಅತೀತ) ಎಂದು ಉತ್ತರಿಸುವ ರೀತಿ ಹಾಸ್ಯಾಸ್ಪದವಾಗಿ ತೋರುತ್ತದೆ. 

ಈ ಜಾತ್ಯಾತೀತ ಪಕ್ಷಗಳ ನಾಯಕರೆನಿಸಿಕೊಂಡವರು, ನಮ್ಮ ಪಕ್ಷ ಗೆದ್ದರೆ ದಲಿತ ಮುಖ್ಯಮಂತ್ರಿ, ನಮ್ಮ ಪಕ್ಷ ಗೆದ್ದರೆ ಮುಸ್ಲಿಂ ಮುಖ್ಯಮಂತ್ರಿ ಎಂದು ಹೇಳಿಕೆಗಳನ್ನು ಕೊಡುವುದ ನೋಡಿದರೆ ಇವರುಗಳು ಆಯಾ ಜಾತಿವಾರು ನೇತಾರರೇನೋ ಎಂದೆನಿಸುತ್ತದೆ. ಆದರೆ ಇವರುಗಳು ಜಾತ್ಯಾತೀತ ಜಾತಿವಾದಿಗಳಂತೆ ವರ್ತಿಸುತ್ತಾರೆ. ಪಾಶ್ಚಾತ್ಯ ದೇಶಗಳಲ್ಲಿ ಅಭ್ಯರ್ಥಿ ಒಬ್ಬ ಚುನಾವಣೆ ಗೆದ್ದರೆ ಯಾವ ರೀತಿಯ ಆರ್ಥಿಕ ನೀತಿಯನ್ನು ಅನುಷ್ಠಾನಗೊಳಿಸುವೆ ಎಂಬ ಆತನ ವಾದ, ಮತ್ತು ಅದು ದೇಶಕ್ಕೆ ಹೇಗೆ ಉಪಯುಕ್ತ ಎಂದು ಪ್ರತಿಸ್ಪರ್ಧಿಯ ಜೊತೆ ಮುಖಾಮುಖಿಯಾಗಿ  ಚರ್ಚೆ ನಡೆಸುತ್ತಾನೆ. ವಿಪರ್ಯಾಸವೆಂದರೆ ನಮ್ಮಲ್ಲಿ ನನ್ನ ಪಾರ್ಟಿ ಬಂದು ನನ್ನ ಮಗ ಮುಖ್ಯಮಂತ್ರಿಯಾದರೆ ಸಾಲ ಮನ್ನಾ ಮಾಡುತ್ತೇವೆ, ಇನ್ನೂ ಕೆಲವರು ಅವರು ಮುಖ್ಯಮಂತ್ರಿಯಾದರೆ ಕಳೆದ ಬಾರಿಯಂತೆ ಮಂಚ, ಹಾಸಿಗೆ ಭಾಗ್ಯಗಳ ಜೊತೆಗೆ ಇನ್ನೂ ಬಹಳಷ್ಟು ನೀಡುವ ಭರವಸೆ ಕೊಡುತ್ತಾರೆ ಆಯಾ ಪಂಗಡದವರಿಗೆ ಮಾತ್ರ!

ಜಾತ್ಯತೀತ ಪಕ್ಷ ಒಂದರ ಪ್ರಕಾರ, ಒಂದೇ ಕುಟುಂಬವಷ್ಟೇ ಜಾತ್ಯತೀತ ಎಂಬ ಅಧ್ಯಯನ ನಿಜವಾಗಿಯೂ ಗಮನಾರ್ಹ!


ಇದೇ ಪಕ್ಷದ ನೂತನ ರಾಜ್ಯಾಧ್ಯಕ್ಷರೊಬ್ಬರು ಸಂದರ್ಶನ ಒಂದರಲ್ಲಿ ಕುಳಿತು, ದಲಿತ-ಮುಸ್ಲಿಂ ಒಂದಾದರೆ ನಮಗೆ ಇಷ್ಟು ಮತ, ಒಕ್ಕಲಿಗ-ಮುಸ್ಲಿಂ ಒಂದಾದರೆ ನಮಗೆ ಇಷ್ಟು ಶೇಕಡ ಮತ, ಲಿಂಗಾಯಿತ- ಮುಸ್ಲಿಂ ಒಂದಾದರೆ ನಮಗೆ ಎಷ್ಟೆಷ್ಟು ಶೇಕಡ ಮತ ಬರಬಹುದು ಎಂಬ ಅವರ ಚುನಾವಣೆ ಎದುರಿಸುವ ವಿಧಾನವನ್ನು ಕೇಳಿದರೆ, ಈ ಜಾತ್ಯಾತೀತ ಪಕ್ಷಗಳಲ್ಲಿ ಸಿದ್ದಾಂತವೆಂಬ ಪದಕ್ಕೆ ಬೇರೆಯದೇ ಅರ್ಥವಿದ್ದಂತೆ ಅನ್ನಿಸುತ್ತದೆ. ಇವೆಲ್ಲವ ಹೇಳಿಯೂ ನಾವು ಜಾತ್ಯಾತೀತ ಎಂದು ಇವರು ಹೇಳುವುದು ಜನರು ಮರುಳೆಂದೋ ಅಥವಾ ಏನೆಂದರೂ ಸೆಕ್ಯುಲರ್ ಎಂಬ ಪದ ಇವರಿಗೆ ಶ್ರೀರಕ್ಷೆಎಂದೋ ? 

ಮಾತೆತ್ತಿದರೆ ಬಡವರ ಪರ, ರೈತಪರ ಎಂಬ ಇವರುಗಳು  ಒಂದಿಷ್ಟು ಉಚಿತ ಭಾಗ್ಯಗಳನ್ನು ಕೊಟ್ಟು ರಾಜ್ಯಕ್ಕೆ ಲಕ್ಷ ಕೋಟಿಗಟ್ಟಲೆ ಸಾಲ ಮಾಡಿದ್ದನ್ನು ಬಿಟ್ಟರೆ ಬೇರೇನೂ ಇಲ್ಲ! ಇನ್ನು ಆಯ ಕಟ್ಟಿನ ಜಾಗದಲ್ಲಿ ಅವರವರ ಕಮ್ಯುನಿಟಿಯ ಅಧಿಕಾರಿಗಳನ್ನು ನೇಮಕ ಮಾಡುವುದು ಈಗ ಪ್ರತೀತಿ ಆಗಿಬಿಟ್ಟಿದೆ. ಪಕ್ಷ ,ವೈರತ್ವ , ಭಿನ್ನಾಭಿಪ್ರಾಯ ಇವೆಲ್ಲವ ಬಿಟ್ಟು ತಮ್ಮ ಜಾತಿಯ ಮುಖ್ಯಮಂತ್ರಿಯನ್ನು ಪಟ್ಟದಲ್ಲಿ ಉಳಿಸಲು ಹಲವು ನಾಯಕರು, ಗುರುಗಳೆಲ್ಲಾ ಒಂದಾದ ಬಗೆ ನಿಜಕ್ಕೂ ಆದರ್ಶಪ್ರಾಯ ಅಲ್ಲವೇ? 



 ಅತ್ತಕಡೆ ಕ್ರೇಜ್ ಹುಟ್ಟಿಸುವ ನಾಯಕನೆನೆಸಿಕೊಂಡವರು ದೇಶ ಕಂಡ 'ಸೆಲ್ಫ್ ಬ್ರಾಂಡಿಂಗ್ ' ನ ಆದರ್ಶಪ್ರಾಯ ವ್ಯಕ್ತಿಯೇ ಸರಿ. ಎಲ್ಲವನ್ನೂ ಉಚಿತವಾಗಿ ಕೊಡುವ ಇವರ ಸಾಧನೆ ಸಾಮಾನ್ಯವೇ? ಉದಾಹರಣೆಗೆ ಇವರು ಎಷ್ಟು ಬುದ್ಧಿವಂತರು ಎಂದರೆ ಶಾಲೆಯಲ್ಲಿ ಕ್ಲಾಸ್ ಟೀಚರ್ ಈತನಾದರೆ, ಮಕ್ಕಳೇ ನಿಮಗೆಲ್ಲಾ ವಾರಕ್ಕೆ ಮೂರು ದಿನ ರಜೆ ಕೊಡುತ್ತೇನೆ ನಾಳೆಯಿಂದ ಎಂದು ಘೋಷಿಸಿ, ಮಕ್ಕಳಿಂದ ಶ್ಲಾಗನೆ , ಮಕ್ಕಳ ಪ್ರೀತಿ ಪಡೆದು ನಂತರ ಗೌಪ್ಯವಾಗಿ ಪ್ರಿನ್ಸಿಪಾಲನರ ಬಳಿ ಬಂದು ದಯಮಾಡಿ ಮಕ್ಕಳಿಗೆ ವಾರಕ್ಕೆ ಮೂರು ದಿನ ರಜೆ ಕೊಡಿ ಎಂದು ಬೇಡುವ ಚತುರ. ಇಂಥವರ ಚುನಾವಣಾ ಪ್ರಣಾಳಿಕೆಗಳು ಉಚಿತ ವಿದ್ಯುತ್, ಮಹಿಳೆಯರಿಗೆ ಮಾಶಾಸನ, ಕೋವಿಡ್ ಸಂದರ್ಭದಲ್ಲಿ ಮಕ್ಕಳು ಖಾಸಗಿ ಶಾಲೆಗೆ ಕಟ್ಟಿದ ಫೀಸ್ ಹಿಂತಿರುಗಿಸಿ ಕೊಡುವ ಯೋಜನೆ ಕೇವಲ ಕೆಲವೊಂದು ಧರ್ಮಗಳ ಮಕ್ಕಳಿಗೆ ಮಾತ್ರ! ಉಳಿದವರೆಲ್ಲ ಇವರ ಕಣ್ಣಲ್ಲಿ ಓದುವ ಮಕ್ಕಳಲ್ಲವೇನೋ? , ಇಂತಹ ಹಲವಾರು ಉಚಿತಗಳ ಔಚಿತ್ಯವೇ ಬಿರುಸಾಗಿ ಮುನ್ನಡೆಯುತ್ತಿರುವ ದೇಶದ ಆರ್ಥಿಕತೆಗೆ ಹಿಂದೆಳೆಯುವ ಹಗ್ಗದಂತೆ.


ಇತ್ತೀಚಿನ ಆರ್ ಬಿ ಐ ವರದಿ ಪ್ರಕಾರ ಇವರುಗಳು ನೀಡುವ  ಕೆಲವು ಉಚಿತ ಯೋಜನೆಗಳಿಗೆ ಜನಮರುಳಾಗುವುದು ಮುಂದುವರೆದರೆ ಭಾರತವನ್ನು ಆರ್ಥಿಕತೆಯಲ್ಲಿ ಶ್ರೀಲಂಕಾವನ್ನಾಗಿಸುವ ಎಲ್ಲಾ ಕ್ಷಮತೆ ಕ್ರೇಜ್ ಹುಟ್ಟಿಸುವ ಇವರಿಗಿದೆ.

ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರು ಹೇಳುವಂತೆ, ರಾಜ್ಯ ಸರಕಾರಗಳು ತಮ್ಮ ಹಣಕಾಸಿನ ಸಾಮರ್ಥ್ಯಕ್ಕೂ ಮೀರಿ ಉಚಿತ ಸೌಲಭ್ಯಗಳನ್ನು ನೀಡುವುದು ದೇಶದ ಆರ್ಥಿಕ ವ್ಯವಸ್ಥೆಗೆ ಆರೋಗ್ಯಕರವಲ್ಲ. 

ಆಗಸ್ಟ್ 3, 2022 ರಂದು ಸುಪ್ರೀಂ ಕೋರ್ಟ್ ಗೆ ಅಶ್ವಿನಿ ಉಪಾಧ್ಯಾಯ ಅವರು ತಮ್ಮ ಪಿಐಯೆಲ್ ನಲ್ಲಿ , ರಾಜಕೀಯ ಪಕ್ಷಗಳು ಮತ್ತು ಸಾಲದ ಶೂಲದಲ್ಲಿ ಸಿಕ್ಕಿರುವ ಆಯಾ ರಾಜ್ಯಗಳಲ್ಲಿ ಅಧಿಕಾರದಲ್ಲಿರುವವರು , ಮೊದಲು ಯಾರ ಜೇಬಿನಿಂದ ಬಂದ ಹಣದಲ್ಲಿ ಈ ಉಚಿತ ಯೋಜನೆಗಳಿಗೆ ಹಣ ಹೊಂದಿಸುತಿದ್ದೇವೆ ಎಂದು ಮತದಾರರಿಗೆ ತಿಳಿಸಬೇಕು ಎಂಬ ವಾದಕ್ಕೆ ಪ್ರತಿಯಾಗಿ ಸುಪ್ರೀಂ ಕೋರ್ಟ್ ಅಭಾಗಲಬ್ದ ಉಚಿತ ಕೊಡುಗೆಗಳ ಮೇಲೆ ಅಂಕುಶ ಹೇರುವ ಇಂಗಿತ ವ್ಯಕ್ತಪಡಿಸಿತ್ತು.


 ಆರ್ ಬಿ ಐ ನ, ವರದಿಯನೊಮ್ಮೆ ಕಣ್ಣಾಯಿಸಿ ನೋಡುವುದಾದರೆ ರಾಜ್ಯಗಳ ಸಾಲ ಮತ್ತು ಒಟ್ಟು ರಾಜ್ಯದ ಉತ್ಪನ್ನ (ಜಿಡಿಪಿ) ಯ , ಅನುಪಾತಗಳ ಅನ್ವಯ, ಸಾಮಾನ್ಯವಾಗಿ ಆರೋಗ್ಯಕರ ಆರ್ಥಿಕ ಸ್ಥಿತಿಗೆ 20 % ಇರಬೇಕಾದ ಈ ಅನುಪಾತ ಪಂಜಾಬ್ನದ್ದು 53.3%, ಅದರಲ್ಲೂ ಪಂಜಾಬ್ ರಾಜ್ಯದ ತೆರಿಗೆಯಲ್ಲಿ 21.3% ಹಣವನ್ನು ರಾಜ್ಯದ ಸಾಲದ ಬಡ್ಡಿ ತೀರಿಸಲು ಬಳಸುತ್ತದೆ! ಹೀಗೆ ಸಾಲ ಮಾಡಿ ಜನರಿಗೆ ಎಲ್ಲವ ಉಚಿತವಾಗಿ ಕೊಟ್ಟು ನಂತರ ಜನರು ಕಟ್ಟುವ ತೆರಿಗೆಯಲ್ಲಿ ಅಭಿವೃದ್ಧಿಯ ಬದಲು , ಉಚಿತ ಯೋಜನೆಗಳಿಗೆ ಮಾಡಿದ ರಾಜ್ಯದ ಸಾಲದ ಬಡ್ಡಿ ತೀರಿಸುವ ಮಾಡೆಲ್ಗೆ ನಾವು ಕ್ರೇಜಿ ಮಾಡಲ್ ಎಂದು ಕರೆಯಬಹುದೇನೋ ಅಲ್ಲವೇ?

ಕೇರಳ, ಪಶ್ಚಿಮ ಬಂಗಾಳಗಳು ಕೂಡ ಒಟ್ಟು ರಾಜ್ಯದ ತೆರಿಗೆಯಲ್ಲಿ ಕ್ರಮವಾಗಿ 18.8%, 20.8% ನಷ್ಟು ಹಣವನ್ನು ರಾಜ್ಯದ ಉಚಿತ ಯೋಜನೆಗಳಿಗೆ ಮಾಡಿದ ಸಾಲ ತೀರಿಸಲು ಬಳಸುತ್ತದೆ. ಹಿಂದೆ ಇಂಥದೇ ರಾಜಕೀಯದ ಉಚಿತ ಭಾಗ್ಯಗಳ ಸರಮಾಲೆಯಿಂದ ಇಂದು ಕರ್ನಾಟಕ ತೆರಿಗೆ ಹಣದಲ್ಲಿ 14.3% ನಷ್ಟು ಸಾಲದ ಬಡ್ಡಿ ಕಟ್ಟುತ್ತಿದೆ. ಇವರೆಲ್ಲ ಹೀಯಾಳಿಸುವ ಗುಜರಾತಿನ ರಾಜ್ಯದ ಸಾಲ ಮತ್ತು ಜಿಡಿಪಿಯ ಅನುಪಾತ ಕೇವಲ 19% ಮಾತ್ರ. 

 

ಉಚಿತ ಭಾಗ್ಯಗಳು ಘೋಷಣೆ ಯೋಚನೆ ಯೋಜನೆ, ಯಾವುದೂ ಇನ್ನಿಲ್ಲ ಇನ್ನೇನಿದ್ದರೂ ಅಭಿವೃದ್ಧಿಯ ಚಿಂತನೆ ಎಂದು ಮೋದಿಯವರು ಗುಜರಾತ್ ಚುನಾವಣೆಗೂ ಮುನ್ನ ಘೋಷಿಸಿದ್ದು ಉತ್ತಮ ಫಲಿತಾಂಶವನ್ನೇ ತಂದಿದೆ. ಅಂತಹ ಅಭಿವೃದ್ಧಿದಾಯಕ ಚರ್ಚೆ ನಮ್ಮ ಕರುನಾಡ ಚುನಾವಣೆಯಲ್ಲೂ ನಡೆಯಲಿ ಎಂಬುದು ನಮ್ಮ ಆಶಯ.


 ಎಲ್ಲವನ್ನು ಉಚಿತವಾಗಿ ಕೊಡುವ ನಾಯಕ ಜಾತ್ಯಾತೀತ  ಎಂಬುವವರು, ಇತ್ತೀಚೆಗೆ ಅವರದೇ ಪಾರ್ಟಿಯ ಮಂತ್ರಿಒಬ್ಬ ಸುಮಾರು 10000 ಜನ ಹಿಂದುಗಳನ್ನು ಮಾಸ್ ಕನ್ವರ್ಷನ್ ಮಾಡುತ್ತಿದ್ದ ಸಭೆಯಲ್ಲಿ ಉತ್ಸಾಹದಿಂದ ಭಾಗಿಯಾದದ್ದು ಮರೆತರೆ? 

ಹಿಂದೂ ಹಬ್ಬಗಳ ಆಚರಣೆಯ ಸಮಯ ಕ್ಷುಲ್ಲಕ ಕಾರಣಕ್ಕೆ, ಅಥವಾ ಕಾರಣವಲ್ಲದ ಕಾರಣಕ್ಕೆ ಅವಕಾಶವಾದಿಯಂತೆ ಒಂದು ದಿನ ಬಳಸುವ ಸಿಡಿಮದ್ದುಗಳಿಗೆ ನಿಷೇಧ ಹೇರಿದವ  ಮುಂದಿನ ತಿಂಗಳು ಬರುವ ಹೊಸ ವರ್ಷಕ್ಕೆ ಬಳಸುವ ಹತ್ತು ಪಟ್ಟು ಹೆಚ್ಚಿನ ಸಿಡಿಮದ್ದಿಗೆ ನಿಷೇಧ ಹೇರುವನೇ? ಸಾಧ್ಯವೇ ಇಲ್ಲ! ಏಕೆಂದರೆ ಆತ ಜಾತ್ಯಾತೀತ ನಾಯಕ.

 ಮುಂಬರುವ ಚುನಾವಣೆಗಳಲ್ಲಿ ದೇಶದಲ್ಲಿ ಆದ ಬದಲಾವಣೆ, ಆರ್ಥಿಕ ನೀತಿಯ ಸಬಲೀಕರಣ , ವಿದೇಶಾಂಗ ನೀತಿ ಇವುಗಳನ್ನು ಪರಿಗಣಿಸಿ ಚಿಂತಿಸಿ ಮತ ಚಲಾಯಿಸಬೇಕೇ ವಿನಃ ಉಚಿತ ಭಾಗ್ಯಗಳ ನೆನೆದು ನಮ್ಮನ್ನು ನಾವು ಮಾರಿಕೊಳ್ಳುವುದಲ್ಲ. 


Everything merges the other evil into good , religion in politics & generosity in justice!

ಶ್ರೀನಿಧಿ ಭಟ್ ,ಕೊಂಡಳ್ಳಿ.

editorial@vyakhyana.com



Comments

Popular posts from this blog

೨೦೨೪ ರ ಟಾಪ್ ೧೦ ಕನ್ನಡ ಚಲನಚಿತ್ರಗಳು : Top 10 Kannada Movies of 2024

ನಿರ್ದೇಶಕ ಗುರುಪ್ರಸಾದ್ ನೆನೆಪಿನಲ್ಲಿ - ಎರಡನೇಸಲ | In memory of Director Guruprasad - EradaneSala

India-Pakistan : A Civilizational War | Shrinidhi Bhat